ಚೆರಿ -
 	ರೋಸೆóೀಸೀ ಕುಟುಂಬಕ್ಕೆ ಸೇರಿದ ಒಂದು ಜನಪ್ರಿಯ ಹಣ್ಣಿನ ಮರ. ಬಾದಾಮಿ, ಸಕ್ಕರೆಬಾದಾಮಿ, ಪ್ಲಮ್, ಪೀಚ್ ಮರಗಳಿಗೆ ಬಲು ಹತ್ತಿರ ಸಂಬಂಧಿ. ಅನೇಕ ಶತಮಾನಗಳಿಂದ-ಬಹುಶಃ ಕೃಷಿಗಾರಿಕೆಯ ಆರಂಭದ ಕಾಲದಿಂದ-ಯೂರೋಪ್ ಹಾಗೂ ಏಷ್ಯಗಳ ಸಮಶೀತೋಷ್ಣವಲಯಗಳಲ್ಲಿ ಇದು ಒಂದು ಪ್ರಮುಖ ಹಣ್ಣಿನ ಮರವಾಗಿದೆ. ಹುಟ್ಟಿಹಾಕಿದ ಸ್ವಲ್ಪ ಕಾಲದಲ್ಲೇ ಸಮೃದ್ಧವಾಗಿ ಹಣ್ಣು ಬಿಡುವುದರಿಂದ ಪ್ರತಿವರ್ಷ ತಪ್ಪದೇ ಫಲ ಕೊಡುವುದರಿಂದ ಮತ್ತು ಇದನ್ನು ಬಲು ಸುಲಭವಾಗಿ ಬೇಸಾಯ ಮಾಡಬಹುದಾದ್ದರಿಂದ ಚೆರಿ ಮರ ಬಹಳ ಜನಪ್ರಿಯಾವಾಗಿದೆ. ಈ ಜಾತಿಯ ವೈಜ್ಞಾನಿಕ ಹೆಸರು ಪ್ರೂನಸ್. ಇದರಲ್ಲಿ ಸಿಹಿಚೆರಿ (ಪ್ರೂನಸ್ ಏವಿಯಮ್) ಮತ್ತು ಹುಳಿಚೆರಿ (ಪ್ರೂನಸ್ ಸೆರೇಸಸ್) ಎಂಬ ಎರಡು ಬಗೆಗಳುಂಟು. ಸಿಹಿ ಚೆರಿ ಹಣ್ಣನ್ನು ಹಾಗೆಯೇ ತಿನ್ನಬಹುದು. ಹುಳಿ ಚೆರಿ ಹಣ್ಣನ್ನು ಬೇಯಿಸಿ ತಿನ್ನಬೇಕು. ಎರಡು ಬಗೆಗಳಿಂದಲೂ ತಂಪು ಪಾನೀಯವನ್ನು ತಯಾರಿಸುವುದಿದೆ. ಅಲ್ಲದೆ ಇವನ್ನು ಅಲಂಕಾರಕ್ಕೋಸ್ಕರ ರಸ್ತೆಯ ಅಕ್ಕಪಕ್ಕಗಳಲ್ಲಿ ಬೆಳೆಸುವುದೂ ಉಂಟು.	

ಸಿಹಿಚೆರಿ: ಇದು ಮೂಲತಃ ದಕ್ಷಿಣ ಮತ್ತು ಮಧ್ಯ ಯೂರೋಪ್ ಹಾಗೂ ಪಶ್ಚಿಮ ಏಷ್ಯದ ಗಿಡ. ಜರ್ಮನಿ, ಫ್ರಾನ್ಸ್, ಚೆಕೊಸ್ಲೊವಾಕಿಯ, ಪೋಲೆಂಡ್, ಇಟಲಿ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಇದರ ಬೇಸಾಯ ಅಧಿಕ. ಭಾರತದಲ್ಲಿ ಕಾಶ್ಮೀರ, ಸಿಮ್ಲಾ ಕುಲು ಕಣಿವೆಗಳ 1,500-2,000 ಮೀ. ಎತ್ತರದ ಬೆಟ್ಟ ಪ್ರದೇಶಗಳಲ್ಲಿ ಲಘು ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶಗಳಲ್ಲೂ ಇದರ ಬೇಸಾಯ ಉಂಟು. ಸಿಹಿಚೆರಿ ಸುಮಾರು 2.5 ಮೀ. ಎತ್ತರಕ್ಕೆ ಗೋಪುರದಾಕಾರದಲ್ಲಿ ಬೆಳೆಯುವ ಮರ. ಎಲೆಗಳು ಆಯತಾಕಾರದವು; 6-15 ಸೆಂ.ಮೀ. ಉದ್ದ ಇವೆ. ಇವುಗಳ ತುದಿ ಮೊನಚು; ಅಂಚು ಗರಗಸದಂತೆ. ಹೂಗಳು ಸೈಮೋಸ್ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ; ಬಣ್ಣ ಬಿಳಿ. ಹಣ್ಣುಗಳು ಗುಂಡಗೆ ನಯವಾಗಿದೆ; ಬಣ್ಣ ಹಳದಿ, ಕೆಂಪು ಇಲ್ಲವೆ ಕಪ್ಪು. ತಿರುಳು ಮೃದು ಇಲ್ಲವೆ ದೃಢ. ಸಿಹಿ ಅಥವಾ ಕಿರುಗಹಿ. ಸಿಹಿಚೆರಿ ಗಿಡವನ್ನು ಕಸಿ ಕಟ್ಟುವುದರಿಂದ (ಗ್ರ್ಯಾಫ್ಟಿಂಗ್) ಇಲ್ಲವೆ ಕಣ್ಣುಕಸಿ ಮಾಡುವುದರಿಂದ (ಬಡಿಂಗ್) ವೃದ್ಧಿಸಲಾಗುತ್ತದೆ. ಹೀಗೆ ಮಾಡುವಾಗ ಏವಿಯಮ್ ಪ್ರಭೇದದ ಕಾಂಡವನ್ನು ಇಲ್ಲವೆ ಮೊಗ್ಗನ್ನು ತಾಳುಸಸ್ಯವನ್ನಾಗಿಯೂ ಸೆರಸಾಯ್ಡಿಸ್ ಪ್ರಭೇದದ ಇಲ್ಲವೆ ಮಹಾಲೆಚ್ ಅಥವಾ ಸೆರೇಸಸ್ ಪ್ರಭೇದದ ಕಾಂಡವನ್ನು ಬೊಡ್ಡೆಯಾಗಿಯೂ ಬಳಸಲಾಗುತ್ತದೆ. ಇದರ ಬೇಸಾಯಕ್ಕೆ ಬಳಸಲಾಗುವ ಭೂಮಿ ಚೆನ್ನಾಗಿ ನೀರು ಬಸಿದು ಹೋಗುವಂತಿರಬೇಕಲ್ಲದೆ. ಬೇರುಗಳು ಆಳಕ್ಕೆ ಇಳಿಯಲು ಅನುಕೂಲವಾಗಿಯೂ ಫಲವತ್ತಾಗಿಯೂ ಇರಬೇಕು. ಬೇಸಾಯದ ಮೊದಲೆರಡು ವರ್ಷ ಗಿಡಗಳಿಗೆ ಚೆನ್ನಾಗಿ ನೀರು ಹಾಯಿಸಬೇಕು. ಮರಗಳು ಹುಲುಸಾಗಿ, ಹರಡಿಕೊಂಡು ಬೆಳೆಯುವುದರಿಂದ ಮರದಿಂದ ಮರಕ್ಕೆ ಸುಮಾರು 7.5-9.0 ಮೀ ಅಂತರ ಇರುವುದು ಒಳ್ಳೆಯದು. ಒಂದು ಮರಕ್ಕೆ ವರ್ಷಕ್ಕೆ 75 ಕೆಜಿ ಕೊಟ್ಟಿಗೆ ಗೊಬ್ಬರ, 5-4 ಕೆಜಿ ಅಮೋನಿಯಮ್ ಸಲ್ಪೇಟ್ ಹಾಕಬೇಕು. ಗೊಬ್ಬರವನ್ನು ಒಂದೇ ಸಲಕ್ಕೆ ಒಟ್ಟಿಗೆ ಹಾಕದೆ 2-3 ಕಂತಿನಲ್ಲಿ ಹಾಕುವುದು ಒಳ್ಳೆಯದು. ಅಮೆರಿಕ ಮುಂತಾದೆಡೆ ಓಟ್ಸ್, ಬಾರ್ಲಿ, ಅಲಸಂದೆ ಇಲ್ಲವೆ ಕ್ಲೋವರ್ ಸಸ್ಯಗಳನ್ನು ಹೊದರುಗಿಡಗಳಾಗಿ ಬೆಳೆಸುವುದುಂಟು. ಇದರಿಂದ ಭೂಮಿಯ ಫಲವಂತಿಕೆ ಹೆಚ್ಚುತ್ತದೆಯಾದ್ದರಿಂದ ಚೆರಿ ಬೇಸಾಯಕ್ಕೆ ಒಳ್ಳೆಯದು. ಹಣ್ಣುಗಳನ್ನು ಕೀಳಲು ಅನುಕೂಲವಾಗಲೆಂದು ನಾಟಿ ಮಾಡಿದ ಮೊದಲೆರಡು ವರ್ಷ ಗಿಡದ ಮುಖ್ಯ ಕಾಂಡ ಹಾಗೂ ಕೆಲವು ರೆಂಬೆಗಳನ್ನು ಕತ್ತರಿಸಿ ಮರ ಪೊದೆಯಂತೆ ಹರಡಿಕೊಂಡು ಬೆಳೆಯುವಂತೆ ಮಾಡಲಾಗುತ್ತದೆ. ಕಸಿ ಮಾಡಿ ಬೆಳೆಸಿದ 4-5 ವರ್ಷಗಳ ಅನಂತರ ಚೆರಿಮರ ಫಲವನ್ನೀಯಲು ಆರಂಭಿಸುತ್ತದೆ. ಗರಿಷ್ಠ ಇಳುವರಿ ಮರಕ್ಕೆ 10 ವರ್ಷ ವಯಸ್ಸಾದ ಮೇಲೆಯೆ. ಇಳುವರಿಯ ಮೊತ್ತ 10-18 ಕೆಜಿ. ಒಂದು ಮರ 40-60 ವರ್ಷದ ವರೆಗೆ ಹಣ್ಣು ಬಿಡುತ್ತ ಹೋಗುತ್ತದೆ. ಹಣ್ಣುಗಳು ಕೊಯ್ಲಿಗೆ ಸಿದ್ಧವಾಗುವ ಕಾಲ ಮೇ-ಜುಲೈ. ಅವು ಚಿಕ್ಕ ಗಾತ್ರದವಾದ್ದರಿಂದ ಕೊಯ್ಲು. ಮತ್ತು ಡಬ್ಬ ಇಲ್ಲವೆ ಬುಟ್ಟಿಗಳಲ್ಲಿ ತುಂಬಿಡುವುದು ದುಬಾರಿ ಖರ್ಚಿನ ಕೆಲಸ. ಸಾಮಾನ್ಯವಾಗಿ ಅವನ್ನು ತೊಟ್ಟು ಸಹಿತ ಬಿಡಿಸಿ 2-4 ಕೆಜಿ. ಹಣ್ಣು ಹಿಡಿಯುವಂಥ ಬುಟ್ಟಿಗಳಲ್ಲೊ 4.5 ಕೆಜಿ ಹಿಡಿಯುವಂಥ ಪೆಟ್ಟಿಗೆಗಳಲ್ಲೊ ತುಂಬುತ್ತಾರೆ. ಸಿಹಿಚೆರಿಯ ಕೆಲವು ಬಗೆಗಳ ಹಣ್ಣುಗಳು (ಉದಾಹರಣೆಗೆ ಎಂಪರರ್ ಫ್ರಾನ್ಸಿಸ್) ಮಳೆ ಇಲ್ಲವೆ ಕಾವಳಕ್ಕೆ ಈಡಾದರೆ ಬಿರಿದು ಹೋಗುತ್ತವೆ. ಇಂಥ ಸಂದರ್ಭಗಳಲ್ಲಿ ಹಣ್ಣನ್ನು ಇಳಿಸುವ ಮುನ್ನ ಬೋರ್ಡೊ ದ್ರಾವಣ ಇಲ್ಲವೆ ಸುಣ್ಣವನ್ನು ಸಿಂಡಿಸುವುದರಿಂದ ಅಥವಾ ಮಣ್ಣಿಗೆ ಬೊರ್ಯಾಕ್ಸ್ ಹಾಕುವುದರಿಂದ ಬಿರಿಯುವಿಕೆಯನ್ನು ತಡೆಗಟ್ಟಬಹುದು.	

ಸಿಹಿಚೆರಿಗೆ ಹೆಚ್ಚು ಹಾನಿಕರವಾದ ಬೂಷ್ಟು ರೋಗಗಳಾಗಲಿ, ಕೀಟ ಪಿಡುಗುಗಳಾಗಲಿ ಅಂಟುವುದಿಲ್ಲ. ಭಾರತದಲ್ಲಿ ಸರ್ಕೊಸ್ಪೊರ ರೂಬ್ರೊಟಿಂಕ್ಟ ಬೂಷ್ಟಿನಿಂದ ಬರುವ ಎಲೆಮಚ್ಚೆರೋಗ, ಅಮೆರಿಕ ಮತ್ತು ಯೂರೋಪುಗಳಲ್ಲಿ ಸ್ಲ್ಕೀರೊಟೀಯನಿಯ ಫ್ರಕ್ಟೀಜೀನದಿಂದ ಬರುವ ಕಂದುಬಣ್ಣದ ಕೊಳೆರೋಗ, ಸಿಲಿಂಡ್ರೊಸ್ಪೋರಿಯಮ್ ಪಾಡಿಯಿಂದ ಬರುವ ಎಲೆಬೂಷ್ಟು ರೋಗ ಮುಖ್ಯವಾದವು. ಬೋರ್ಡೊ ದ್ರಾವಣವನ್ನು ಸಿಂಪಡಿಸುವುದರಿಂದ ಇದನ್ನು ಯಶಸ್ವಿಯಾಗಿ ನಿರೋಧಿಸಬಹುದು. ಕೀಟಪಿಡುಗುಗಳಲ್ಲಿ ಮುಖ್ಯವಾದವು ಈಯೊಲೆಸ್ತಿಸ್ ಹಲೊಸೆರೀಸಿಯ ಕೀಟದ ಡಿಂಬ, ಪ್ರೋಟೋಯೀಷಿಯ<ಇಂಪ್ಯಾವಿಡ, ಸ್ಟಲಾಗೋಸೋಮ ಆಲ್ಬೆಲ, ಮಿಮೆಲ ಪ್ಯಾಸರಿಸಿಯೈ ಹಾಗೂ ಮಿಲೊಸೆಸಸ್ ಲೆಫ್ರಾಯೈ ಎಂಬ ಜೀರುಂಡೆಗಳು.

	ಸಿಹಿಚೆರಿಯಲ್ಲಿ ಅನೇಕ ತಳಿಗಳಿವೆ. ಇವುಗಳಲ್ಲು ಮುಖ್ಯವಾದವು; ಮಜಾರ್ಡ್ (ಏವಿಯಮ್), ಹಾರ್ಟ್‍ಚೆರಿ (ಜೂಲಿಯಾನ), ಜಿಗಾರೊ (ಡ್ಯೂರಸೀನ).

	ಹುಳಿಚೆರಿ: ಇದು ಪಶ್ಚಿಮ ಏಷ್ಯ ಮತ್ತು ಆಗ್ನೇಯ ಯೂರೋಪಿನ ಮೂಲವಾಸಿ. ಯೂರೋಪ್, ಅಮೆರಿಕಗಳಲ್ಲಿ ಹಣ್ಣಿಗಾಗಿ ಮಾತ್ರವಲ್ಲದೆ ಅಲಂಕಾರಕ್ಕಾಗಿ ಕೂಡ ಬೆಳೆಸುತ್ತಾರೆ. ಭಾರತದಲ್ಲೂ ಕಾಶ್ಮೀರ, ಕುಮಾಂವ್, ಗಢವಾಲ್ ಮುಂತಾದೆಡೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ಬೆಳೆಸಲಾಗುತ್ತದೆ. ಇದು ಸಿಹಿಚೆರಿಗಿಂತ ಹೆಚ್ಚು ದೃಢಕಾಯದ ಮರವಾಗಿದ್ದು ಹೆಚ್ಚು ಆರೈಕೆಯಿಲ್ಲದೆ ಬೆಳೆಯಬಲ್ಲದು. ಅಲ್ಲದೆ ಇದಕ್ಕೆ ಬೂಷ್ಟು ರೋಗಗಳ ಹಾಗೂ ಕೀಟಗಳ ವಿರುದ್ಧ ಹೆಚ್ಚು ನಿರೋಧ ಸಾಮಥ್ರ್ಯ ಉಂಟು. ಇದರ ಕೃಷಿ ಸಿಹಿಚೆರಿಯದರಂತೆಯೇ. ಹಣ್ಣುಗಳಲ್ಲಿ ಆಮ್ಲೀಯತೆ ಹೆಚ್ಚಾಗಿರುವುದರಿಂದ ಸಿಹಿಚೆರಿ ಹಣ್ಣುಗಳಿಗಿಂತ ಇವು ಹೆಚ್ಚು ಹುಳಿಯಾಗಿವೆ. ಹುಳಿಚೆರಿಯಲ್ಲಿ ಅಮರೆಲ್‍ಚೆರಿ (ಸೆರೇಸಸ್), ಮೊರೆಲೊ ಚೆರಿ (ಅಸ್ಟರ) ಮತ್ತು ಮರಾಸ್ಕ ಚೆರಿ (ಮರಾಸ್ಕ) ಎಂಬ ಬಗೆಗಳಿವೆ. ಸಿಹಿಚೆರಿ ಮತ್ತು ಹುಳಿಚೆರಿಯ ಕೆಲವು ಬಗೆಗಳನ್ನು ಅಡ್ಡಹಾಯಿಸಿ ಪಡೆಯಲಾಗಿರುವ ಡ್ಯೂಕ್ ಚೆರಿ ಎಂಬ ತಳಿಯೂ ಬೇಸಾಯದಲ್ಲಿದೆ.

	ಚೆರಿಹಣ್ಣುಗಳ ರಾಸಾಯನಿಕ ಸಂಯೋಜನೆ ತೇವಾಂಶ 83.0%, ಪ್ರೋಟೀನ್ 1.1%, ಕೊಬ್ಬು 0.5%, ನಾರು 0.3%, ಕಾರ್ಬೊಹೈಡ್ರೇಟು 14.2%, ಖನಿಜಾಂಶ 0.6% ಮತ್ತು ಪ್ರತಿ 100 ಮಿ. ಗ್ರಾಂ. ತಿರುಳಿನಲ್ಲಿ 18 ಮಿ.ಗ್ರಾಂ. ಕ್ಯಾಲ್ಸಿಯಮ್, 20 ಮಿ.ಗ್ರಾ.ರಂಜಕ, 0.4 ಮಿ.ಗ್ರಾಂ. ಕಬ್ಬಿಣ, 8 ಮಿ.ಗ್ರಾಂ. ಆಸ್ಕಾರ್ಬಿಕ್ ಆಮ್ಲ ಮತ್ತು ಅತ್ಯಲ್ಪ ಮೊತ್ತದ ರೈಬೋಫ್ಲೇವಿನ್ ಹಾಗೂ ನಯಾಸಿನ್ ವಿಟಮಿನ್‍ಗಳು ಇವೆ. ಕಾಯಿಯಾಗಿದ್ದಾಗ ಇರುವ ಹುಳಿ ಇಲ್ಲವೆ ಒಗಚು ರುಚಿ ಹಣ್ಣು ಮಾಗಿದಂತೆ ಕಡಿಮೆಯಾಗಿ ಹಣ್ಣು ಸಿಹಿಯಾಗುತ್ತದೆ. ಸಕ್ಕರೆಯ ಅಂಶ ಗ್ಲೂಕೋಸ್ ಮತ್ತು ಫ್ರಕ್ಟೋಸ್ ರೂಪದಲ್ಲಿರುತ್ತದೆ. ಸಿಹಿಚೆರಿಯಲ್ಲಿ 0.64% ಆಮ್ಲ (ಮ್ಯಾಲಿಕ್ ಆಮ್ಲ) ಇದ್ದರೆ ಹುಳಿಚೆರಿಯಲ್ಲಿ ಇದರ ಮೊತ್ತ 1.4%. ಇದರಿಂದಾಗಿಯೇ ಹುಳಿಚೆರಿ ಹೆಚ್ಚು ಹುಳಿಯಾಗಿದೆ.

	ಉಪಯೋಗ: ಸಿಹಿಚೆರಿಯನ್ನು ಹೆಚ್ಚಾಗಿ ಊಟವಾದ ಮೇಲೆ ತಿನ್ನುವ ಸಿಹಿಭಕ್ಷ್ಯವಾಗಿ ಉಪಯೋಗಿಸಲಾಗುತ್ತದೆ. ಇದು ಬಲುಬೇಗ ಕೆಟ್ಟುಹೋಗುವುದರಿಂದ ಸಮಾನ್ಯವಾಗಿ ಸಕ್ಕರೆ ಪಾಕ ಇಲ್ಲವೆ ಸಲ್ಫರ್ ಡೈ ಆಕ್ಸೈಡ್ ಮತ್ತು ಕ್ಯಾಲ್ಸಿಯಮ್ ಕಾರ್ಬೋನೇಟ್ ದ್ರಾವಣಗಳ ಮಿಶ್ರಣದಲ್ಲಿ ನೆನೆಯಿಸಿ ಸಂಗ್ರಹಿಸಿಡಲಾಗುತ್ತದೆ. ಹೀಗೆ ಇಡುವಾಗ ಒಳಗಿನ ಬೀಜವನ್ನು ತೆಗೆಯಬಹುದು ಇಲ್ಲವೆ ಹಾಗೆಯೇ ಬಿಡಬಹುದು. ಕೆಲವು ಸಲ ಚೆರಿ ಹಣ್ಣುಗಳನ್ನು ಶೀತಲಿಸಿ ಇಲ್ಲವೆ ಬಿಸಿಲಿನಲ್ಲಿ ಒಣಗಿಸಿ ಇಡುವುದೂ ಉಂಟು. ಒಣಗಿಸುವ ಮುನ್ನ ಲೈ ದ್ರಾವಣ ಮತ್ತು ಗಂಧಕಗಳಿಂದ ಹಣ್ಣುಗಳನ್ನು ಸಂಸ್ಕರಿಸಲಾಗುತ್ತದೆ. ಚೆರಿ ಹಣ್ಣುಗಳನ್ನು ಸ್ಯಾಲಡ್, ಐಸ್‍ಕ್ರೀಮ್ ಮುಂತಾದ ಭಕ್ಷ್ಯಗಳ ತಯಾರಿಕೆಗೆ ಬಳಸಲಾಗುತ್ತದೆ. ಸಿಹಿಚೆರಿಯ ರಸದಿಂದ ಕಿರ್ಷ್‍ವಾಸರ್ ಎಂಬ ಮಾದಕ ಪಾನೀಯವನ್ನೂ ತಯಾರಿಸುವುದಿದೆ. ಈ ಉಪಯೋಗಗಳಲ್ಲದೆ ಚೆರಿಬೀಜದಿಂದ ಒಂದು ರೀತಿಯ ಎಣ್ಣೆಯನ್ನೂ ಪಡೆಯುವುದುಂಟು. ಚೌಬೀನೆ ತುಂಬ ಸೊಗಸಾಗಿ ಮೆರುಗನ್ನು ತೆಗೆದುಕೊಳ್ಳುವುದರಿಂದಲೂ ದೃಢವಾಗಿರುವುದರಿಂದಲೂ ಇದನ್ನು ಪೀಠೋಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.
(ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ